Total Pageviews

Friday, August 2, 2013

ಭಯ, ಆಕೆಯೊಂದಿಗಿನ ನನ್ನ ಸಂಬಂಧ

ಸುಮಾರು ಎಂಟು ವರ್ಷಗಳ ಹಿಂದೆ ಅನ್ಸುತ್ತೆ, ಆವಾಗ ಎಂಟನೆ ತರಗತಿಯಲ್ಲಿ ಓದ್ತಾ ಇದ್ದೆ. ಶಾಲೆಯ ಸಮಯ ಬೆಳಿಗ್ಗೆ ಎಂಟರಿಂದ ಒಂದು ಆಗಿದ್ದ ಕಾರಣ, ಮಧ್ಯಾಹ್ನ ಮನೇಲಿ ಒಬ್ಬಂಟಿಯಾಗಿ ಕಳಿತಾ ಇದ್ದೆ. ಅಪ್ಪ ಅಮ್ಮ ಕೆಲಸದ ಮೇಲೆ ಹೋಗಿದ್ದರೆ ತಂಗಿ ಶಾಲೆಯಲ್ಲಿ ಇರ್ತಿದ್ಲು .ನನ್ನ ಮನೆ ಸುತ್ತ ಸುಮಾರು ಮರ- ಗಿಡಗಳು ಇದ್ದು, ಕತ್ತಲೆ ಆವರಿಸಿಕೊಂಡಿದ್ದ ಕಾರಣವೋ ಏನೋ, ವಯಸ್ಸಿಗೆ ಸಹಜವಾಗಿ ಪಕ್ಕಾ horror ಸಿನಿಮಾದ ಸೆಟ್ ಅಂತೆ ಭಾಸವಗುತ್ತಿದುದು ಸುಳ್ಳೇನಲ್ಲ!ಹೀಗಿರುವಾಗ ಒಂದಿನ ಮನೆ ಬಂದವನೇ, ಹಾಟ್ ಬಾಕ್ಸ್-ನಲ್ಲಿಕ್ಕಿದ ತಯಾರಿದ್ದ ಅಡುಗೆ ಧ್ವಂಸ ಮಾಡಿ(ತಿಂದು ತೇಗಿ ) ದಿನಚರಿಯಂತೆ ಹಿತವಾದ ನಿದ್ದೆಗೆ ಜಾರಲು ನನ್ನ ಕೊಠಡಿಯ ಮಂಚವನ್ನ ಏರಿದ್ದೆ. ಸಾಮಾನ್ಯವಾಗಿ ನನ್ನ ತಾಯಿ, ಕೆಲಸ ಮುಗಿಸಿ ಮನೆಗೆ ಮರಳುವ ಕೆಲವು ನಿಮಿಷಗಳ ಮುನ್ನ ಎದ್ದು, ಪಾಠ ಪುಸ್ತಕವನ್ನು ಹಿಡಿದು ಕೂರುವುದು ವಾಡಿಕೆ!ಆದರೆ ಆ ದಿನ, ನಿದ್ರಾ ದೇವತೆ ನನ್ನ ಆವರಿಸುತ್ತಿದ್ದಂತೆ, ಎಲ್ಲೋ ಒಂದು ಶಬ್ದ ಕೇಳಿದ ಅನುಭವ! ಮೊದಮೊದಲು, ಕಡೆಗಣಿಸಿದ ನಾನು ಸಮಯ ಕಳೆಯುತ್ತಿದ್ದಂತೆ ಎದೆಯಲ್ಲಿ ಒನೆಕೆ ಕುಟ್ಟಿದ ಅನುಭವ. ನಿಧಾನಕ್ಕೆ ಮಂಚದಿಂದ ಕೆಳಗೆ ಇಳಿದವನೇ, ಬಗ್ಗಿ ಮಂಚದಡಿ ನೋಡಲು ಒಬ್ಬ ಮುದುಕ ವಿಚಿತ್ರವಾಗಿ ಬಿದ್ದುಕೊಂಡಿರೋದು ಕಂಡು ಬಂತು! ತಡ ಮಾಡದೇ ನಿತ್ತ ಜಾಗದಿಂದಲೇ ಬಾಗಿಲ ಹೊರಕ್ಕೆ ಜಿಗಿದು , ಕದದ ತಾಳ ಜಡಿದವನೇ ದೂರವಾಣಿ ಕೈಗೆತ್ತಿಕೊಂಡು, ಅಪ್ಪನಿಗೆ ಫೋನ್ ರಿಂಗಣಿಸಿದ್ದೆ.
--------------------------------------------------------------------------------------------------------------------------------------------------
ಈಗ ಉಳಿದ ಭಾಗದ ಕತೆಯನ್ನ ಬದಿಗಿಟ್ಟು, ನನ್ನ ಅರಿವಿಗೆ ಬಾರದೆ ನಾನ್ ಕೈಗೊಂಡ ಮುಂಜಾಗ್ರತೆಯ ವರ್ತನೆಗೆ ಕಾರಣವಾದರೂ ಏನು?ಭಯ ಹೆದರಿಕೆ ಅನ್ನಬಹುದೇ? ಹೌದು ನನಗನ್ನಿಸೋ ಮಟ್ಟಿಗೆ ಇದು ಭಯ.
ಉಳಿದ ಭಾಗದ ಕಥೆ ಇಲ್ಲ ಅವಶ್ಯವಲ್ಲದಿದ್ರೂ, ನಿಮ್ಮ ಕುತೂಹಲಕ್ಕೆ ತಣ್ಣೇರೆರೆಚುವವ ನಾನಲ್ಲ. ವಾಸ್ತವದಲ್ಲಿ ನಾನು ಮಂಚದ ಅಡಿ ಕಂಡ ವ್ಯಕ್ತಿ ಬೇರ್ಯಾರು ಅಲ್ಲ ನನ್ನ ತಂಗಿ ಆಗಿದ್ದುದು. ಹಲವಾರು ಕಾರಣಗಳ ದೆಸೆಯಿಂದ ಆಕೆ ಶಾಲೆಗೆ ಹೋಗಲು ಇಷ್ಟ ಪಡದೆ, ಮನೆಯಲ್ಲಿ ಅವಿತು ಕೂರುವ ಹುನ್ನಾರ ನಡೆಸಿದ್ದಳು. ಭಯ ಹಾಗು ಕತ್ತಲೆ ಕಾರಣ ಆಕೆ ಮುದುಕನಂತೆ ಕಂಡಿದ್ದಳೆನೋ!ನಾನು ಇಲ್ಲಿ ಕೈಗೊಂಡ ಮುಂಜಾಗೃತೆಯ ಮೂಲ ಕಾರಣ ಭಯ. ಎಲ್ಲಾದರು ಆ ದಿನ ನನಗೆ ನಿಜವಾದ ಅಪಾಯ ಇದ್ದಿದ್ರೂ ಭಯದ ದೆಸೆಯಿಂದ ಪಾರಾಗ್ತಾ ಇದ್ದೆ ಅನ್ಸುತ್ತೆ.
ಸಾಮಾನ್ಯವಾಗಿ ಭಯವನ್ನು ಹೀಗೆ ಬಣ್ಣಿಸಲಾಗಿದೆ 'ಒಂದು ರೀತಿಯ ಮನಸ್ಸಿನ ದುಗುಡ/ ಉದ್ವೇಗದ ಪರಿಣಾಮವಾಗಿ ಒಂದು ಜೀವಿಯು ತಾನು ಅಪಾಯವನ್ನು ಗ್ರಹಿಸಿದಾಗ , ಅವಿತುಕೊಳ್ಳುವುದು ಅಥವಾ ತಾನಿರುವ ಜಾಗದಿಂದ ಪಲಾಯನಗೈವುದು'. ಇಲ್ಲಿ ಬಣ್ಣಿಸಿರುವ ದುಗುಡ ಅಥವಾ ಉದ್ವೆಗವೆ ಭಯ ಆಗಿದೆ.
 ನನಗೆ ಬಹಳಷ್ಟು ದಿನಗಳಿಂದ ಇದ್ದ ಗೊಂದಲ ಇದು. ಭಯ (fear ) ಹಾಗೂ ಭೀತಿ (phobia ) ಇವುಗಳ ನಡುವಿನ ವ್ಯತ್ಯಾಸವೇನು ಎಂಬುದು.
ಸರಿ ಇದಕ್ಕೆ ಉದಾಹರಣೆಯೊಂದನ್ನು ಇಟ್ಕೊಳೋಣ.ಒಬ್ಬ ಅಂದದ ಹುಡುಗಿಯನ್ನು ಮನದಲ್ಲಿ ಇಟ್ಟಕೊಂಡು, ಪ್ರಣಯ ಭಾವನೆಯೊಂದಿಗೆ ನನ್ನದೆ ಲೋಕದಲ್ಲಿ ಸೀಟಿ ಊದಿಕೊಳ್ಳುತ್ತಲೊ ಇಲ್ಲವೋ ಹಾಡುತ್ತ ಮನೆಯಡೆಗೆ ಹೆಜ್ಜೆ ಹಾಕುವಾಗ, ಯಾರೋ ನನ್ನ ಗೆಳೆಯರೊಬ್ಬ ಬಾಗಿಲ ಹಿಂದೆ ಅವಿತು ನಿತ್ತು ನನಗಾಗಿ ಕಾದು , 'ಹೊ' ಎಂದು ಬೊಬ್ಬಿಟ್ಟ ಅಂತ ಇಟ್ಟುಕೊಳ್ಳಿ. ಆಗ ನನಲ್ಲಿ ಉಂಟಾಗುವ ಉದ್ವೆಗವೆ ಭಯ ಅಥವಾ fear .
ಸರಿ, ಈಗ ಇದೆ ರೀತಿ ಕಾಕತಾಳಿಯ ಎಂಬುವಂತೆ, ನಾನು romatic mood ಗೆ ಜಾರಿದಾಗೆಲ್ಲ, ಇದೆ ರೀತಿಯ ಅನುಭವ ಮೂರು ಅಥವಾ ನಾಲ್ಕು ಸಲ ಆದೊಡೆ, ಏನಾಗ್ಬೊದು ಅಂತ ಊಹಿಸುವ.
 - ಇನ್ನೊಂದು ಸಲ ನಾನ್ romantic mood ಗೆ ಜಾರಿದಾಗ, ನನಗೆ ತಿಳಿಯದಂತೆ ನನ್ನ ಒಳ ಮನಸ್ಸು ಹೇಳಬಹುದು 'ಮಗ ಇಲ್ಲ್ಯಾರೋ ಅವಿತು ಕೂತು, ಹೊ ಅಂತ ಬೋಬ್ಬಿಟ್ಟು ನೀನು ಹೌಹಾರುವಂತೆ ಮಾಡ್ತಾರೆ', ಈಗ ನನ್ನ ಮೂಡ್  ಮಾಯ!
 - ಈ ಸಲ ಯಾರೋ romance ಮಾಡೋದನ್ನ ನೋಡ್ದೆ ಅನ್ಕೊಳಿ, ಪುನಃ ಭಯ
 - ಕೊನೆಗೊಂದು ದಿನ, ನಾನಾಗೆ ರೋಮ್ಯಾನ್ಸ್ ಮಾಡಬೇಕಾದಾಗ ದರಿದ್ರದ್ದು ಈ ಭಯ!
ಈ ಮೇಲಿನ ನನ್ನ ಮಾನಸಿಕ ತುಮುಲತೆಯನ್ನ ಭೀತಿ ಅಥವಾ phobia ಅನ್ನಬಹುದು. ಖಂಡಿತವಾಗಿಯೂ ಈ ಲಕ್ಷಣಕ್ಕೆ ಮನೋರೋಗ ಚಿಕಿತ್ಸೆ ಬೇಕೇ ಬೇಕು.
-------------------------------------------------------------------------------------------------------------------------------------------------- ವಯಕ್ತಿಕವಾಗಿ ನಾನೊಬ್ಬ 'ಗಾಬರಿ' ಮಾನುಷ್ಯ ಅಂದ್ರೆ ತಪ್ಪಿಲ್ಲ . ಎಲ್ಲಕ್ಕೂ  ಗಾಬರಿ ಪಡುವ ಮನುಷ್ಯ. ವ್ಯಕ್ತಿ, ಸಂಧರ್ಭ, ಸಮಾರಂಭ ಎಲ್ಲಕ್ಕೂ ಗಾಬರಿ ಪಡುವವ!
ಸರಿ ಒಂದು ಫ್ಲಾಶ್ ಬ್ಯಾಕ್ ಗೆ ಜಾರೊಣ.ಅಂದು ಎರಡನೇ ತರಗತಿಯ ಮೊದ ಮೊದಲ ದಿನಗಳು. ಶಿಕ್ಷಕಿ ಬಹಳ ಕಟ್ಟು ನಿಟ್ಟು, ಆದಾಗಲೇ ಎರಡು ಬಾರಿ ಹೊಡೆತ ತಿಂದು, ಇತರ ಸಹಪಾಠಿಗಳು ಹೊಡೆತ ತಿನ್ನೋದಕ್ಕೆ ಸಾಕ್ಷಿಯಾಗಿದ್ದೆ. ಒಂದು ಚಟುವಟಿಕೆ ಯೊಜಿಸಿದರು. ಅದರ ಪ್ರಕಾರ ಒಬ್ಬೊಬ್ಬರಾಗಿ ಎದ್ದು ನಿತ್ತು, ತಂತಮ್ಮ ತಂದೆ ತಾಯಿ ಯಾವ್ಯಾವ ಉದ್ಯೋಗದಲ್ಲಿರುವರು ಅಂತ ಹೇಳ್ಬೇಕಿತ್ತು. ನನಗೇನೋ ನಮ್ಮಮ್ಮ ಹೈಸ್ಕೂಲ್ ಶಿಕ್ಷಕಿ ಅಂತ ಗೊತ್ತಿತ್ತು. ಆದ್ರೆ ತಂದೆಯವರು ಆಫೀಸ್ ಹೋಗೋದು ಗೊತ್ತಿತ್ತೆ ಹೊರತು ಏನ್ ಮಾಡ್ತಾರೆ ಅಂತ ಗೊತ್ತಿರ್ಲಿಲ್ಲ.ಸರಿ, ಏನಾದರೊಂದು ಹೇಳ್ಬೇಕು, ಗೊತ್ತಿಲ್ಲ ಎಂದಲ್ಲಿ ಶಿಕ್ಷೆ ಖಚಿತ.ಸರಿ ನನ್ನ ಸರದಿ, 'ನನ್ನ ಅಪ್ಪ ಆಪೀಸಿನಲ್ಲಿ ಕಸ ಗುಡಿಸುತ್ತಾರೆ' ಎಂದು ಆಗಿತ್ತು. ಶಿಕ್ಷಕಿ ಸಿಟ್ಟಿನಿಂದ 'ಏನ್ ಹೇಳ್ತಾ ಇದ್ದಿ ಮಾರಾಯ ನೀನು' ಅಂತ ಗುಡುಗಿದ್ರು. ನಾನು ನನ್ನಷ್ಟಕ್ಕೆ 'ನಾನ್ ಸುಳ್ಳು ಹೇಳಿದ್ರೆ ಇವರಿಗೆಲ್ಲಿ ಗೊತ್ತಾಗಬೇಕು' ಅನ್ನೋ ಭರದಲ್ಲಿ, ನಾನು ಹೇಳಿದ್ದು ಸರಿ ಅಂತ ತಲೆ ಆಡಿಸಿದ್ದೆ. ಪ್ರಾರಬ್ಧ ಶಿಕ್ಷೆ ತಪ್ಪಿತೇ ? ಇಲ್ಲ ಎರಡೇಟು ಜಾಸ್ತಿ ಬಿದ್ದು, 'ಏನ್ ಹೇಳು, ನನ್ನ ತಂದೆ ಆಫೀಸ್ ಕೆಲಸ ಮಾಡುತ್ತಾರೆ' ಅಂತ ನಮ್ ಮೇಡಂ ತಿದ್ದಿದ್ರು.
-------------------------------------------------------------------------------------------------------------------------------------------------
ವರ್ಷಗಳು ಕಳೆದವು, ಆದ್ರೆ ಭಯದೊಂದಿಗಿನ ನನ್ನ ಸಂಬಂಧ ಮುಂದುವರೆದೆ ಇತ್ತು. ಆವಾಗ ನಾನು ಎಂಟನೆ ತರಗತಿ, ನನ್ನ ಹೆತ್ತವರು ಕನ್ನಡ ಮಾಧ್ಯಮದಿಂದ ಇಂಗ್ಲಿಷು ಮೀಡಿಯಂ ಗೆ ಸೇರುವಂತೆ ಮಾಡಿದ್ದರು. ಪುನಃ ನಾನು ಹಿತವಲ್ಲದ ತಾಣಕ್ಕೆ ಜಾರಿದ್ದೆ. ನನ್ನ ಜತೆಗಾತಿ 'ಭಯ' ನನ್ನ ಬಿಗಿಯಾಗಿ ಅಪ್ಪಿದ್ದಳು.ಮಾತನಾಡಲು ಭಯಪಟ್ಟಿದ್ದೆ, ಯೋಚಿಸಲು ಭಯಪಟ್ಟಿದ್ದೆ, ಮಾನವರೊಂದಿಗೆ ಬೆರೆಯಲು ಭಯ ಪಟ್ಟಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ಹದಿಹರೆಯಕ್ಕೆ ಕಾಲಿರಿಸುತ್ತಿದ್ದೆ. ಅದೆಂತ ವಯಸ್ಸಂದ್ರೆ , ಸತ್ಯದೊಂದಿಗೆ ಕೆಲವು ತಲೆಬುಡವಿಲ್ಲದ ಮಿಥ್ಯಗಳು ಅರಿವಾಗುವ ದಿನಗಳವು. ಭಯ ತನ್ನ ಹಿಡಿತವನ್ನು ಬಿಗಿಯಾಗಿಸಿದ್ದಳು.ಹಾಗೋ ಹೇಗೋ ದಿನ ಕಳೆದಂತೆ , ಆಕೆಯ ಹಿಡಿತವನ್ನ ಸಡಿಲಗೊಳಿಸಿ ಹಗುರವಾಗಿ ಉಸಿರಾಡಲು ಕಲಿತಿದ್ದೆ. ಆದ್ರೆ ನಾನು ಮತ್ತು 'ಭಯ'ಳ ಸಂಬಂಧ ಅಲ್ಲಿಗೆ ಮುಗಿದೊಯ್ತು ಅಂತ ಪರಿಗನಿಸಬೇಡಿ. ಅದು ಅಲ್ಲಿಗೆ ಹದಗೆಟ್ಟಿತ್ತು.
--------------------------------------------------------------------------------------------------------------------------------------------------
ದಿನಗಳು ಕಳೆದುವು, ಇಂಜಿನಿಯರಿಂಗ್ ಗೆ ಸೇರಿಕೊಂಡೆ. ನಾನು, ಆತ್ಮವಿಶ್ವಾಸದಿಂದ ಕೂಡಿದ ಬಲಿಷ್ಠ ಯುವಕನೆಂಬ ಭಾವನೆ ನನ್ನಲ್ಲಿ. 'ಸರಿ, ಈಗಲಾದರು ನನ್ನ 'ಭಯ'ಳ ಸಂಬಂಧವನ್ನ ಕಳಚಿಕೊಂಡು, ಯಾರಾದರೂ ಅಂದದ ಚೆಂದದ ವ್ಯಕ್ತಿಯೊಂದಿಗೆ ಸಂಬಂಧ ಕುದುರಿಸುವ' ಎಂಬ ಯೊಜನೆ.ಆದ್ರೆ ಏನ್ ಮಾಡ್ಲಿ, ಸೆಮಿಸ್ಟರ್ ಪರೀಕ್ಷೆಯ ಹಿಂದಿನ ದಿನವೇ ಅರಿವಾಕ್ತಿತ್ತು, ಓಹೋ ಭಯ ಇನ್ನ ನನ್ನ ಜತೆಗಾತಿ ಎಂದು.
-------------------------------------------------------------------------------------------------------------------------------------------------
ಮುಗಿಸುವ ಮುನ್ನ , ನಾನು ಕಲಿತಿದ್ದು ಏನಂದ್ರೆ 'ಭಯ'ಳ ಜತೆಗಿನ ಸಂಬಂಧವನ್ನ ಶಾಶ್ವತವಾಗಿ ಕಡಿಯಲು ಸಾಧ್ಯವಿಲ್ಲ. ಆದ್ರೆ ಆಕೆಯನ್ನ ನಿಭಾಯಿಸ್ಬೊದು.ಆದರಿಂದ ಭಯವನ್ನ ಒಂದು ಮಟ್ಟಿಗೆ ನಿಮ್ಮ ಜೋತೆಗಾತಿಯಾಗಿ ಇಟ್ಟುಕೊಳ್ಳಿ, ಯಾಕಂದ್ರೆ ನೀವು ಯಾವುದೇ ಅಪಾಯಕ್ಕೆ ಕಾಲಿಡದಂತೆ ಮುನ್ನದೆಸುವವಳೆ ಭಯ. ಆದ್ರೆ ಅವಶ್ಯವಿದ್ದಷ್ಟು ದೂರವೂ ಇರಿ, ಇಲ್ಲಾಂದ್ರೆ ಯಶಸ್ಸಿನಡೆಗಿನ ನಿಮ್ಮ ಸಾಹಸಮಯ ಪ್ರಯಾಣಕ್ಕೆ ಅದ್ದಿಯಾದಾಳು .

ಸ್ವಲ್ಪ ವಿವರಣೆ : ಆಫೀಸ್ ನಲ್ಲಿ ಒಂದು ಇವೆಂಟ್ ನಲ್ಲಿ  ಒಂದು ಸಣ್ಣ ಭಾಷಣ ಪ್ರಸ್ತುತ ಪಡಿಸ್ಬೇಕಾದಾಗ, ಆಂಗ್ಲದಲ್ಲಿ ಈ ಸ್ಕ್ರಿಪ್ಟ್ ಅನ್ನು ತಯಾರಿಸಿದ್ದೆ. ಇದನ್ನೇ ಬರಹವಾಗಿ ಯಾಕೆ ಹೊರ ತೆಗಿಬಾರದು ಅಂತ ಯೋಚಿಸಿದಾಗ, ಹೊಮ್ಮಿದ್ದೆ ಈ ತಲೆ ಹರಟೆ. ಕಾಗುಣಿತ ತಪ್ಪುಗಳಿಗೆ ಕ್ಷಮೆಯಿರಲಿ. 

Friday, September 9, 2011

ಮೊಟ್ಟ ಮೊದಲ ತಲೆ ಹರಟೆ(ತರ್ಲೆ)!!!

Disclaimer : ಈ ನನ್ನ ತಲೆ ಹರಟೆ ಯಾವುದೇ ಕಾಲ್ಪನಿಕ, ಕಟ್ಟು ಕತೆ ಅಥವಾ ಯಾವುದೋ ಪರಭಾಷಾ ಚಿತ್ರಗಳಿಂದ ಎತ್ಥಾಕಿದ  ಐಟಂ ಆಗಿರುವುದಿಲ್ಲ , ಇದು ನಮ್ಮ ನಿಮ್ಮ ನಡುವೆ ನಡೆದಿರುವ ನಡೆಯುತ್ತಿರುವ ಸನ್ನಿವೇಶ ಎಂಬುದಕ್ಕಿಂತ ಈ ನನ್ನ ಕಣ್ಣಿಗೆ (ಕಾಮಾಲೆ ಕಣ್ಣಿಗೆ)  ಕಾಣುವ ತರಲೆ situation ಗಳು  ಎಂಬುದೇ ಸೂಕ್ತ!!!
ಈ ನನ್ನ ತರ್ಲೆ ತಲೆ ಹರಟೆಯಿಂದ ಯಾರಿಗಾದರು ತಲೆಕೆಟ್ಟು ಯಡವಟ್ಟು ಆದಲ್ಲಿ , ನಮ್ಮನ್ನು ದೂರುವುದಕ್ಕಿಂತ ನಿಮ್ಮ ಹತ್ತಿರದ ಮನಶಾಸ್ತ್ರಜ್ಞರನ್ನ ಕಾಣಿರಿ.

                ಬ್ಲಾಗ್ ಬರೀಬೇಕು, ಬ್ಲಾಗ್ ಬರೀಬೇಕು ಅಂತ ಬಹಳಷ್ಟು ಸಲ ಹಗಲು ರಾತ್ರಿ ಕಾಡಿದ್ದಿದೆ(ಕ್ಷಮಿಸಿ ರಾತ್ರಿ ಕಾಡುವ ಸುಂದರ ಕನ್ಯೆಯರು ಕಾಡುವಷ್ಟಲ್ಲ ಬಿಡಿ). ಸುಮಾರು ಐದಾರು ವರ್ಷ, ಇಂಟರ್ನೆಟ್ ಎಂಬ ಮಹಾ ಪಿಡುಗು ನನಗೆ  ತಗುಲಿದಾಗಿಂದ ಎಂದಿಟ್ಟುಕೊಳ್ಳಿ .......ಆದ್ರೆ ಏನ್ಮಾಡ್ಲಿ ೧೬ ವರ್ಷದ ಹುಡುಗನಿಗೆ ಇಂಟರ್ನೆಟ್ ಎಂಬ ಪಿಡುಗು ತಾಗಿದರೆ, ಗಾಯದ್ಮೇಲೆ ಬರೆ ಎಳೆದಂಗೆ ತಾ ಮುಂದೆ ನಾನ್ ಮುಂದೆ ಅಂತ ಆರ್ಕುಟ್ , ಫೇಸ್ಬುಕ್ ಅಂತ ಮಹಾ ರೋಗಗಳು ಅಂಟುಕೊಳ್ಳೋದು ಕಷ್ಟಾನ ಹೇಳಿ??  ಇಂಟರ್ನೆಟ್ಟ್ ಅಂದ್ರೆ ಇವುಗಳೇ ಅನ್ನುವ ಮಟ್ಟಿಗಿದ್ರೂ, ಕೆಲವು ಒಳ್ಳೆಯ ಬರಹಗಳು ಕಾಡಿದ್ದು ಸುಳ್ಳಲ್ಲ ಬಿಡಿ.
           ಅಂತು ಇಂತೂ ದಿನಗಳು ಕಳೀತು, ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಕಿತ್ತಾಕಿದ್ದೂ ಆಯಿತು, ಒಂದ್ ಹೊತ್ತಿನ ಗಂಜೀ ಅಂತ ಕೆಲಸ ಅರಸಿ ಚೆನ್ನೈಗೆ  (ಒಹ್, ಚೆನ್ನೈ ಅಂದಾಗ ನೆನಪು ಬಂತು...ಈ ಊರಿನ ಬಗ್ಗೆನೂ ಏನಾದ್ರು ಬರೀಬೇಕು ಅಂತ ಯೋಚನೆ ಇದೆ, ಈ ಸೋಮಾರೀತನ ಎಡೆ ಮಾಡಿ ಕೊಟ್ರೆ , ಇನ್ನೊಂದ್ ತಲೆ ಹರಟೆ ರೆಡಿ ಮಾಡ್ತೀನಿ ಬಿಡಿ) ಬಂದಿದ್ದೂ ಆಯಿತು. ಆಹ ಇಲ್ಲಿ ಕಣ್ಣಿಗೆ ಕಾಣ್ಸೋ ಝರಿ ಬಾರ್ಡರಿನ ರೇಷ್ಮೆ ಸೀರೆಗಳೋ, ತಲೆ ಮೇಲ್ ಕೂತಿರೋ ಮೊಳಗಟ್ಲೆ ಮಲ್ಲಿಗೆಗಳೋ, 'ಆ ದಿನಗಳು' ಸಿನ್ಮಾದಲ್ ಇರೋ ತರ ಸೈಕಲ್ಗಳ ಮೇಲೆ ಏರಿ ಬರೋ ಮಹಿಳಾ ಮಣಿಗಳೋ, ಕ್ಷಮಿಸಿ ಜಾಸ್ತಿ ಆಯಿತು ಅನ್ಸುತ್ತೆ, ಕೊನೆಯದಾಗಿ ಎಳ್ಳಷ್ಟು ಜಾಗ ಬಿಡದೆ ಅರಶಿನ ಮೆತ್ಕೊಂಡಿರೋ   'ಅಮವಾಸ್ಯೆ ಕಡುಗತ್ತಲಲ್ಲಿ ಇರೋ ಡಾಮರ್ ರಸ್ತೆಯ  ಬಣ್ಣವನ್ನ' ಹೋಲುವಂತ ಮುಖಗಳನ್ನ (ದಯವಿಟ್ಟು ಗಮನಿಸಿ ನಾನೊಬ್ಬ racist  ಅಲ್ಲ, ಕಾಮಿಡಿ ಟಚ್ ಇರ್ಲಿ ಅಂತ ಅಸ್ಟೆ) ಬೆರಗಾಗಿ ನೋಡೋದ್ರಲ್ಲಿ  ವಾರಗಳು ಕಳೆದು ತಿಂಗಳಾಗಿದ್ದೆ ತಿಳೀಲಿಲ್ಲ. ಇನ್ನೆಲ್ಲಿ ಅಂತ ಇಂಟರ್ನೆಟ್ಟು ಬ್ಲಾಗಿನ ಜಪ್ತಿ ಬರಬೇಕು??
          ಸರಿ, ಹೊಸ ಜಾಗ ಹೊಸ ಮನೆ,ಹೊಸ ಫ್ರೆಂಡ್ಸು ಇದ್ದಂಗೆ ಹೊಸ ಹುಡ್ಗೀರು ಇರ್ತಾರೆ ತಾನೇ?,ಗಮನದಲ್ಲಿರಲಿ ನಾನು ಪ್ರಸ್ತಾಪ ಮಾಡಲಿರುವ ಹುಡುಗಿಯರು ಯಾವುದೇ ಕಾರಣಕ್ಕೂ ಸ್ತಳೀಯರಾಗಿರುವುದಿಲ್ಲ, ನನ್ನಂತೆ ಬೇರೆ ಊರುಗಳಿಂದ ಬಂದಿರುವ 'ಡಗಾರ್'ಗಳಾಗಿರುತ್ತಾರೆ. ಈ ಹೊಸ ಹುಡ್ಗೀರ್ನ ನೋಡೋದು , ಅವ್ರ ಬಗ್ಗೆ ಮಾಹಿತಿ ಕಲೆ ಹಾಕೋದು ಅದನ್ನ ಮನೆಗ್ ಬಂದು, ಮಹಾ ತಲೆ ಹರಟೆಗಳ (ಗೆಳೆಯರು) ಜೊತೆ gossip ಹಾರ್ಸೋದು ನಡಿದೆ ಇತ್ತು. ಸರಿ ಇಷ್ಟೆಲ್ಲಾ ಸರ್ಕಸ್ ಮಾಡಿಯೂ, ಒಂದು fact ಏನಪ್ಪಾ  ಕೊನೆಗೂ  ಕನಿಷ್ಠ ಒಬ್ಬ ಹುಡುಗಿ ಅನ್ನೋ ಪ್ರಾಣಿ ಎದರು ತುಟಿ ಪಿಟಿಕ್ ಅನ್ಲಿಲ್ಲ  ನೋಡಿ. ಬಹುಷಃ ನಮಗೆ ವಿಟಮಿನ್ 'ಮೀಟರ್' deficiency ಇರೋದೇ ಕಾರಣ ಅನ್ಸುತ್ತೆ. 
        ಗಮನಿಸಿ ಹೊಸ ಊರಿಗೆ ಕಾಲಿಟ್ಟು ಇನ್ನೂ ೨ ತಿಂಗಳುಗಳು ಕಳೆದಿವೆಯಷ್ಟೇ.ಅಂದ ಹಾಗೆ ತಲೆ ಹರಟೆಗಳು in the sense , ಗೆಳೆಯರು ಎಂದಾಗ ನೆನಪಾಯ್ತು ನೋಡಿ. ಇವರು ಎಲ್ಲಾ ಗೆಳೆಯರಂತೆ , as usual ಮಹಾ ಲೋಫರ್ ಗಳೇ ಆಗಿದ್ರು.ಪ್ರಾಯಶಃ ಇಲ್ಲಿಯವರೆಗೂ ಮಾನಸಿಕ ಸಮತೋಲನ ಕಾಯ್ದುಕೊಂಡು ಸರಿಯಾಗಿ ಇರೋದಿಕ್ಕೆ ಇವರೇ ಕಾರಣ ಅನ್ಸುತ್ತೆ . ಬಹುಷಃ ಮನುಷ್ಯನಿಗೆ ಅವನಪ್ಪ ಅಮ್ಮ ಬಿಟ್ರೆ ಆಮೇಲೆ ಆಗೋದು ಈ freinds ಅನ್ನೋ ಲೋಫರ್ ಗಳೇ. ಇವರ ಜೊತೆ ಕಳ್ದಿರೋ/ಕಳಿಯಲಿರೋ ಒಂದೊಂದು  ಕ್ಷಣವೂ ಬೆಲೆ ಕಟ್ಟಲಾಗದ ಸಮಯ ಅನ್ಬೋದೇನೋ.ಸಾಕು ತರಲೆಗಳನ್ನ ಜಾಸ್ತಿ ಹೋಗಳಬಾರ್ದಂತೆ!!!. 
      ಅಂತೆಯೇ  ಒಂದ್ ರೀತಿನಲ್ಲಿ ಅದೃಷ್ಟವಂತರೆ ನಾವು, ನಮ್ಮನೇನಲ್ಲಿ ನಾವೈದು ಜನ ಕನ್ನಡಿಗರಾದ್ರೆ, ಎದ್ರುಗಡೆ ಮನೆ ಬಾಡಿಗೆಗೆ ಹಿಡಿದೋರು ೫ ಮಂದಿ ಕನ್ನಡಿಗರು. ಇದು ನಮ್ಮನೆ ಅದು ನಿಮ್ಮನೆ ಎಂಬ ಬೇದ ಇರಲೇ ಇಲ್ಲ. ಒಬ್ಬನ ಚಪ್ಪಲ್ ಇಲ್ ಬಿದ್ದಿದ್ರೆ ಅವ್ನ ಕಾಲ್ಚೀಲ ಆ ಮನೇಲಿ ಬಿದ್ದಿರೋದು!! ಇಂತಾ ದಿನಗಳ ಮಧ್ಯೆಯೂ ಬ್ಲಾಗ್ ಯೋಚನೆ ಮಿಂಚಿನಂತೆ ಸುಳಿದು ಹೋಗ್ತಾ ಇದ್ದಿದ್ದು ಸುಳ್ಳಲ್ಲ. 

          ದಿನಗಳು ಕಳೆದವು, ಟ್ರೈನಿಂಗು ಮಣ್ಣು ಮಸಿ ಅಂತ ಏನೋ ಇರುತ್ತಲ್ಲ, ಎಲ್ಲಾ ಮುಗುದ್ವು. ಎಲ್ಲರಿಗೂ ಪ್ರಾಜೆಕ್ಟ್ ಅನ್ನೋ ಯಾತನೆ ಸಿಕ್ತು. ಚೆನ್ನೈ ನಲ್ಲಿ OMR (Old Mahabalipuram Road) ಅಂತ ಇದೆ. ಅದನ್ನ  ಬೆಂಗಳೂರಿನಲ್ಲಿರೋ ಹೊರ ವರ್ತುಲ ರಸ್ತೆಗೆ ಹೋಲಿಸಬಹುದು. ಸಿಕ್ಕಾಪಟ್ಟೆ IT ಕಂಪನಿಗಳು. ಇಲ್ಲೇ ನಮ್ಮ ಕಂಪನಿಯ ಸುಮಾರು ಎಂಟರಿಂದ ಹತ್ತು ಆಪೀಸುಗಳು ಹರಡಿಕೊಂಡಿವೆ. ಇವುಗಳಲ್ಲಿ ಒಬ್ಬೊಬ್ಬನಿಗೆ ಒಂದೊಂದರಂತೆ ಸುಮಾರಾಗಿ ಬೇರೆ ಬೇರೆ  ಆಪೀಸುಗಳೇ  ನಿಗದಿಪಟ್ಟವು. ಎಲ್ಲರೂ ಬೇರೆ ಬೇರೆ ಆದೆವು. ಬೇರೆ ಬೇರೆ ಮನೆಗಳನ್ನ ಹಿಡಿದೆವು.
            ಹೀಗಿರುವಾಗ ನನ್ನ ಬೀಡನ್ನೂ ಬದಲಾಯಿಸ ಬೇಕಾಗಿ ಬಂತು. ಇಲ್ಲಿಯೂ ಅದೃಷ್ಟವೆಂಬಂತೆ , ಹೊಸ ಬಿಡಾರದಲ್ಲೂ ಕನ್ನಡಿಗರೇ ಸೇರಿಕೊಂಡೆವು. ಹೊಸ ಮನೆ, ಹೊಸ ಸದಸ್ಯರು , ಇಲ್ಲಿನ ಅಡುಗೆ ಮನೆ ನಮ್ಮನ್ನು ಬಗೆ ಬಗೆಯ ಅಡುಗೆ ಮಾಡಿ ತಿನ್ನೋದ್ರಲ್ಲೇ ತಲ್ಲೀನವಾಗಿರಿಸಿತು. ಹೀಗೆ ದಿನಗಳು ಕಳೆಯುತ್ತಿರುವಾಗ,ಒಂದು ಸುದಿನ ಎದುರುಗೊಂಡೆ  ಬಿಟ್ಟಿತು. ಅದು ಶುಕ್ರವಾರದ ದಿನ. ಆಪೀಸಿನಲ್ಲೂ ಎಲ್ಲರೂ ವೀಕೆಂಡ್ ಮೂಡ್ನಲ್ಲಿದ್ದ ಕಾರಣ, ನನ್ನ ನೆಮ್ಮದಿಗೆ ಯಾವುದೇ ಭಂಗ ಬರ್ಲಿಲ್ಲ(ಎಷ್ಟೇ  ಆದರೂ ಅಣ್ಣಾವ್ರು ಸಂಪತ್ತಿಗೆ ಸವಾಲ್ನಲ್ಲಿ ಕೂರೋ ಎಮ್ಮೆ ತರ, ನೆಮ್ಮದಿಗೆ ಭಂಗವಿಲ್ಲದೆ ವರ್ಷ ಇಡೀ  ಇರೋಕಾಗುತ್ತ್ಯೆ??) .
          ಮನೆನಲ್ಲೂ ರಾತ್ರಿಯಿಡೀ ಕೂತು  ಹರಟೆ ಹೊಡ್ಯೋಕೆ, ಯಾವ ಪಾಪಿನೂ ಇಲ್ಲ. ಒಬ್ಬ ಪಾಪಿ ಪ್ರೇಯಸಿ(ಕ್ಷಮಿಸಿ ಇದು ಅತೀ heavy ಆದ ಶಬ್ದವಾಗಿರುವ ಕಾರಣ GF ಅಂತ ಬಳಸೋದೆ ಸೂಕ್ತ ಅನ್ಸುತ್ತೆ) ಅಂತ ಬೆಂಗಳೂರಿಗೆ ಹೋದ್ರೆ. ಇನ್ನೊಬ್ಬ ಲೈಫು ಇಷ್ಟೇನೆ ಸಿನಿಮಾ ನೋಡ್ಬೇಕು ಅಂತ ಹೋಗಿದಾನೆ, ಮೆಚ್ಚಲೇ  ಬೇಕು ಅಭಿಮಾನವನ್ನ!!. ಕೊನೆಯವನು ಕಳೆದ ವಾರ ಊರಿಗೆ ಹೊದೋನು ಬರಬೇಕಾಗಿದೆ ಅಷ್ಟೇ. ಇಂತಾ ಸಮಯದಲ್ಲಿ ಮುಹೂರ್ತ ಕೈಗೂಡಿತ್ತೋ ಏನೋ, ಈ ತರ್ಲೆ ತಲೆ ಹರಟೆ ಬರಹ  laptop ನ ಪರದೆಯ ಮೇಲೆ, ಅಂದದ ಕನ್ನಡದಲ್ಲಿ  ಮುತ್ತಿನಂತೆ ಉದುರತೊಡಗಿತ್ತು..............

ಕೃತಜ್ಞತೆ/ಕೃತಘ್ನತೆ
ಗೂಗಲ್ ಅನುವಾದ,
laptop ಅನ್ನು ಸ್ನೇಹಿತನಿಗಾಗಿ ಬಿಟ್ಟು ಹೋದ room mate .
ಮತ್ತು ಈ ನನ್ನ ಅರ್ಥಹೀನ ಅಸಂಬದ್ಧ ಬರಹವನ್ನ ಓದಿದ ಎಲ್ಲಾ ಓದುಗರು.


................................................................................................................................................................................................................
ಮೇಲೆ ಇರುವ ಬರಹದಲ್ಲಿ ಯಾವುದೇ ವ್ಯಾಕರಣ, ವಾಕ್ಯ ರಚನೆ ದೋಷ, ಮತ್ತು ಅಗ್ಗವೆಂದು (vulgar) ಎಂದು ಕಂಡು ಬಂದಲ್ಲಿ ದಯವಿಟ್ಟು ಕ್ಷಮಿಸಬೇಕಾಗಿ ಓದುಗರಲ್ಲಿ ಮನವಿ.
ಯಾವುದೇ ಪ್ರಶಂಸೆ, ತಿದ್ದುಪಡಿಗಳಿಗೆ ಮುಕ್ತ ಹೃದಯದ ಸ್ವಾಗತ.