Disclaimer : ಈ ನನ್ನ ತಲೆ ಹರಟೆ ಯಾವುದೇ ಕಾಲ್ಪನಿಕ, ಕಟ್ಟು ಕತೆ ಅಥವಾ ಯಾವುದೋ ಪರಭಾಷಾ ಚಿತ್ರಗಳಿಂದ ಎತ್ಥಾಕಿದ ಐಟಂ ಆಗಿರುವುದಿಲ್ಲ , ಇದು ನಮ್ಮ ನಿಮ್ಮ ನಡುವೆ ನಡೆದಿರುವ ನಡೆಯುತ್ತಿರುವ ಸನ್ನಿವೇಶ ಎಂಬುದಕ್ಕಿಂತ ಈ ನನ್ನ ಕಣ್ಣಿಗೆ (ಕಾಮಾಲೆ ಕಣ್ಣಿಗೆ) ಕಾಣುವ ತರಲೆ situation ಗಳು ಎಂಬುದೇ ಸೂಕ್ತ!!!
ಈ ನನ್ನ ತರ್ಲೆ ತಲೆ ಹರಟೆಯಿಂದ ಯಾರಿಗಾದರು ತಲೆಕೆಟ್ಟು ಯಡವಟ್ಟು ಆದಲ್ಲಿ , ನಮ್ಮನ್ನು ದೂರುವುದಕ್ಕಿಂತ ನಿಮ್ಮ ಹತ್ತಿರದ ಮನಶಾಸ್ತ್ರಜ್ಞರನ್ನ ಕಾಣಿರಿ.
ಬ್ಲಾಗ್ ಬರೀಬೇಕು, ಬ್ಲಾಗ್ ಬರೀಬೇಕು ಅಂತ ಬಹಳಷ್ಟು ಸಲ ಹಗಲು ರಾತ್ರಿ ಕಾಡಿದ್ದಿದೆ(ಕ್ಷಮಿಸಿ ರಾತ್ರಿ ಕಾಡುವ ಸುಂದರ ಕನ್ಯೆಯರು ಕಾಡುವಷ್ಟಲ್ಲ ಬಿಡಿ). ಸುಮಾರು ಐದಾರು ವರ್ಷ, ಇಂಟರ್ನೆಟ್ ಎಂಬ ಮಹಾ ಪಿಡುಗು ನನಗೆ ತಗುಲಿದಾಗಿಂದ ಎಂದಿಟ್ಟುಕೊಳ್ಳಿ .......ಆದ್ರೆ ಏನ್ಮಾಡ್ಲಿ ೧೬ ವರ್ಷದ ಹುಡುಗನಿಗೆ ಇಂಟರ್ನೆಟ್ ಎಂಬ ಪಿಡುಗು ತಾಗಿದರೆ, ಗಾಯದ್ಮೇಲೆ ಬರೆ ಎಳೆದಂಗೆ ತಾ ಮುಂದೆ ನಾನ್ ಮುಂದೆ ಅಂತ ಆರ್ಕುಟ್ , ಫೇಸ್ಬುಕ್ ಅಂತ ಮಹಾ ರೋಗಗಳು ಅಂಟುಕೊಳ್ಳೋದು ಕಷ್ಟಾನ ಹೇಳಿ?? ಇಂಟರ್ನೆಟ್ಟ್ ಅಂದ್ರೆ ಇವುಗಳೇ ಅನ್ನುವ ಮಟ್ಟಿಗಿದ್ರೂ, ಕೆಲವು ಒಳ್ಳೆಯ ಬರಹಗಳು ಕಾಡಿದ್ದು ಸುಳ್ಳಲ್ಲ ಬಿಡಿ.
ಅಂತು ಇಂತೂ ದಿನಗಳು ಕಳೀತು, ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಕಿತ್ತಾಕಿದ್ದೂ ಆಯಿತು, ಒಂದ್ ಹೊತ್ತಿನ ಗಂಜೀ ಅಂತ ಕೆಲಸ ಅರಸಿ ಚೆನ್ನೈಗೆ (ಒಹ್, ಚೆನ್ನೈ ಅಂದಾಗ ನೆನಪು ಬಂತು...ಈ ಊರಿನ ಬಗ್ಗೆನೂ ಏನಾದ್ರು ಬರೀಬೇಕು ಅಂತ ಯೋಚನೆ ಇದೆ, ಈ ಸೋಮಾರೀತನ ಎಡೆ ಮಾಡಿ ಕೊಟ್ರೆ , ಇನ್ನೊಂದ್ ತಲೆ ಹರಟೆ ರೆಡಿ ಮಾಡ್ತೀನಿ ಬಿಡಿ) ಬಂದಿದ್ದೂ ಆಯಿತು. ಆಹ ಇಲ್ಲಿ ಕಣ್ಣಿಗೆ ಕಾಣ್ಸೋ ಝರಿ ಬಾರ್ಡರಿನ ರೇಷ್ಮೆ ಸೀರೆಗಳೋ, ತಲೆ ಮೇಲ್ ಕೂತಿರೋ ಮೊಳಗಟ್ಲೆ ಮಲ್ಲಿಗೆಗಳೋ, 'ಆ ದಿನಗಳು' ಸಿನ್ಮಾದಲ್ ಇರೋ ತರ ಸೈಕಲ್ಗಳ ಮೇಲೆ ಏರಿ ಬರೋ ಮಹಿಳಾ ಮಣಿಗಳೋ, ಕ್ಷಮಿಸಿ ಜಾಸ್ತಿ ಆಯಿತು ಅನ್ಸುತ್ತೆ, ಕೊನೆಯದಾಗಿ ಎಳ್ಳಷ್ಟು ಜಾಗ ಬಿಡದೆ ಅರಶಿನ ಮೆತ್ಕೊಂಡಿರೋ 'ಅಮವಾಸ್ಯೆ ಕಡುಗತ್ತಲಲ್ಲಿ ಇರೋ ಡಾಮರ್ ರಸ್ತೆಯ ಬಣ್ಣವನ್ನ' ಹೋಲುವಂತ ಮುಖಗಳನ್ನ (ದಯವಿಟ್ಟು ಗಮನಿಸಿ ನಾನೊಬ್ಬ racist ಅಲ್ಲ, ಕಾಮಿಡಿ ಟಚ್ ಇರ್ಲಿ ಅಂತ ಅಸ್ಟೆ) ಬೆರಗಾಗಿ ನೋಡೋದ್ರಲ್ಲಿ ವಾರಗಳು ಕಳೆದು ತಿಂಗಳಾಗಿದ್ದೆ ತಿಳೀಲಿಲ್ಲ. ಇನ್ನೆಲ್ಲಿ ಅಂತ ಇಂಟರ್ನೆಟ್ಟು ಬ್ಲಾಗಿನ ಜಪ್ತಿ ಬರಬೇಕು??
ಸರಿ, ಹೊಸ ಜಾಗ ಹೊಸ ಮನೆ,ಹೊಸ ಫ್ರೆಂಡ್ಸು ಇದ್ದಂಗೆ ಹೊಸ ಹುಡ್ಗೀರು ಇರ್ತಾರೆ ತಾನೇ?,ಗಮನದಲ್ಲಿರಲಿ ನಾನು ಪ್ರಸ್ತಾಪ ಮಾಡಲಿರುವ ಹುಡುಗಿಯರು ಯಾವುದೇ ಕಾರಣಕ್ಕೂ ಸ್ತಳೀಯರಾಗಿರುವುದಿಲ್ಲ, ನನ್ನಂತೆ ಬೇರೆ ಊರುಗಳಿಂದ ಬಂದಿರುವ 'ಡಗಾರ್'ಗಳಾಗಿರುತ್ತಾರೆ. ಈ ಹೊಸ ಹುಡ್ಗೀರ್ನ ನೋಡೋದು , ಅವ್ರ ಬಗ್ಗೆ ಮಾಹಿತಿ ಕಲೆ ಹಾಕೋದು ಅದನ್ನ ಮನೆಗ್ ಬಂದು, ಮಹಾ ತಲೆ ಹರಟೆಗಳ (ಗೆಳೆಯರು) ಜೊತೆ gossip ಹಾರ್ಸೋದು ನಡಿದೆ ಇತ್ತು. ಸರಿ ಇಷ್ಟೆಲ್ಲಾ ಸರ್ಕಸ್ ಮಾಡಿಯೂ, ಒಂದು fact ಏನಪ್ಪಾ ಕೊನೆಗೂ ಕನಿಷ್ಠ ಒಬ್ಬ ಹುಡುಗಿ ಅನ್ನೋ ಪ್ರಾಣಿ ಎದರು ತುಟಿ ಪಿಟಿಕ್ ಅನ್ಲಿಲ್ಲ ನೋಡಿ. ಬಹುಷಃ ನಮಗೆ ವಿಟಮಿನ್ 'ಮೀಟರ್' deficiency ಇರೋದೇ ಕಾರಣ ಅನ್ಸುತ್ತೆ.
ಗಮನಿಸಿ ಹೊಸ ಊರಿಗೆ ಕಾಲಿಟ್ಟು ಇನ್ನೂ ೨ ತಿಂಗಳುಗಳು ಕಳೆದಿವೆಯಷ್ಟೇ.ಅಂದ ಹಾಗೆ ತಲೆ ಹರಟೆಗಳು in the sense , ಗೆಳೆಯರು ಎಂದಾಗ ನೆನಪಾಯ್ತು ನೋಡಿ. ಇವರು ಎಲ್ಲಾ ಗೆಳೆಯರಂತೆ , as usual ಮಹಾ ಲೋಫರ್ ಗಳೇ ಆಗಿದ್ರು.ಪ್ರಾಯಶಃ ಇಲ್ಲಿಯವರೆಗೂ ಮಾನಸಿಕ ಸಮತೋಲನ ಕಾಯ್ದುಕೊಂಡು ಸರಿಯಾಗಿ ಇರೋದಿಕ್ಕೆ ಇವರೇ ಕಾರಣ ಅನ್ಸುತ್ತೆ . ಬಹುಷಃ ಮನುಷ್ಯನಿಗೆ ಅವನಪ್ಪ ಅಮ್ಮ ಬಿಟ್ರೆ ಆಮೇಲೆ ಆಗೋದು ಈ freinds ಅನ್ನೋ ಲೋಫರ್ ಗಳೇ. ಇವರ ಜೊತೆ ಕಳ್ದಿರೋ/ಕಳಿಯಲಿರೋ ಒಂದೊಂದು ಕ್ಷಣವೂ ಬೆಲೆ ಕಟ್ಟಲಾಗದ ಸಮಯ ಅನ್ಬೋದೇನೋ.ಸಾಕು ತರಲೆಗಳನ್ನ ಜಾಸ್ತಿ ಹೋಗಳಬಾರ್ದಂತೆ!!!.
ಅಂತೆಯೇ ಒಂದ್ ರೀತಿನಲ್ಲಿ ಅದೃಷ್ಟವಂತರೆ ನಾವು, ನಮ್ಮನೇನಲ್ಲಿ ನಾವೈದು ಜನ ಕನ್ನಡಿಗರಾದ್ರೆ, ಎದ್ರುಗಡೆ ಮನೆ ಬಾಡಿಗೆಗೆ ಹಿಡಿದೋರು ೫ ಮಂದಿ ಕನ್ನಡಿಗರು. ಇದು ನಮ್ಮನೆ ಅದು ನಿಮ್ಮನೆ ಎಂಬ ಬೇದ ಇರಲೇ ಇಲ್ಲ. ಒಬ್ಬನ ಚಪ್ಪಲ್ ಇಲ್ ಬಿದ್ದಿದ್ರೆ ಅವ್ನ ಕಾಲ್ಚೀಲ ಆ ಮನೇಲಿ ಬಿದ್ದಿರೋದು!! ಇಂತಾ ದಿನಗಳ ಮಧ್ಯೆಯೂ ಬ್ಲಾಗ್ ಯೋಚನೆ ಮಿಂಚಿನಂತೆ ಸುಳಿದು ಹೋಗ್ತಾ ಇದ್ದಿದ್ದು ಸುಳ್ಳಲ್ಲ.
ದಿನಗಳು ಕಳೆದವು, ಟ್ರೈನಿಂಗು ಮಣ್ಣು ಮಸಿ ಅಂತ ಏನೋ ಇರುತ್ತಲ್ಲ, ಎಲ್ಲಾ ಮುಗುದ್ವು. ಎಲ್ಲರಿಗೂ ಪ್ರಾಜೆಕ್ಟ್ ಅನ್ನೋ ಯಾತನೆ ಸಿಕ್ತು. ಚೆನ್ನೈ ನಲ್ಲಿ OMR (Old Mahabalipuram Road) ಅಂತ ಇದೆ. ಅದನ್ನ ಬೆಂಗಳೂರಿನಲ್ಲಿರೋ ಹೊರ ವರ್ತುಲ ರಸ್ತೆಗೆ ಹೋಲಿಸಬಹುದು. ಸಿಕ್ಕಾಪಟ್ಟೆ IT ಕಂಪನಿಗಳು. ಇಲ್ಲೇ ನಮ್ಮ ಕಂಪನಿಯ ಸುಮಾರು ಎಂಟರಿಂದ ಹತ್ತು ಆಪೀಸುಗಳು ಹರಡಿಕೊಂಡಿವೆ. ಇವುಗಳಲ್ಲಿ ಒಬ್ಬೊಬ್ಬನಿಗೆ ಒಂದೊಂದರಂತೆ ಸುಮಾರಾಗಿ ಬೇರೆ ಬೇರೆ ಆಪೀಸುಗಳೇ ನಿಗದಿಪಟ್ಟವು. ಎಲ್ಲರೂ ಬೇರೆ ಬೇರೆ ಆದೆವು. ಬೇರೆ ಬೇರೆ ಮನೆಗಳನ್ನ ಹಿಡಿದೆವು.
ಹೀಗಿರುವಾಗ ನನ್ನ ಬೀಡನ್ನೂ ಬದಲಾಯಿಸ ಬೇಕಾಗಿ ಬಂತು. ಇಲ್ಲಿಯೂ ಅದೃಷ್ಟವೆಂಬಂತೆ , ಹೊಸ ಬಿಡಾರದಲ್ಲೂ ಕನ್ನಡಿಗರೇ ಸೇರಿಕೊಂಡೆವು. ಹೊಸ ಮನೆ, ಹೊಸ ಸದಸ್ಯರು , ಇಲ್ಲಿನ ಅಡುಗೆ ಮನೆ ನಮ್ಮನ್ನು ಬಗೆ ಬಗೆಯ ಅಡುಗೆ ಮಾಡಿ ತಿನ್ನೋದ್ರಲ್ಲೇ ತಲ್ಲೀನವಾಗಿರಿಸಿತು. ಹೀಗೆ ದಿನಗಳು ಕಳೆಯುತ್ತಿರುವಾಗ,ಒಂದು ಸುದಿನ ಎದುರುಗೊಂಡೆ ಬಿಟ್ಟಿತು. ಅದು ಶುಕ್ರವಾರದ ದಿನ. ಆಪೀಸಿನಲ್ಲೂ ಎಲ್ಲರೂ ವೀಕೆಂಡ್ ಮೂಡ್ನಲ್ಲಿದ್ದ ಕಾರಣ, ನನ್ನ ನೆಮ್ಮದಿಗೆ ಯಾವುದೇ ಭಂಗ ಬರ್ಲಿಲ್ಲ(ಎಷ್ಟೇ ಆದರೂ ಅಣ್ಣಾವ್ರು ಸಂಪತ್ತಿಗೆ ಸವಾಲ್ನಲ್ಲಿ ಕೂರೋ ಎಮ್ಮೆ ತರ, ನೆಮ್ಮದಿಗೆ ಭಂಗವಿಲ್ಲದೆ ವರ್ಷ ಇಡೀ ಇರೋಕಾಗುತ್ತ್ಯೆ??) .
ಮನೆನಲ್ಲೂ ರಾತ್ರಿಯಿಡೀ ಕೂತು ಹರಟೆ ಹೊಡ್ಯೋಕೆ, ಯಾವ ಪಾಪಿನೂ ಇಲ್ಲ. ಒಬ್ಬ ಪಾಪಿ ಪ್ರೇಯಸಿ(ಕ್ಷಮಿಸಿ ಇದು ಅತೀ heavy ಆದ ಶಬ್ದವಾಗಿರುವ ಕಾರಣ GF ಅಂತ ಬಳಸೋದೆ ಸೂಕ್ತ ಅನ್ಸುತ್ತೆ) ಅಂತ ಬೆಂಗಳೂರಿಗೆ ಹೋದ್ರೆ. ಇನ್ನೊಬ್ಬ ಲೈಫು ಇಷ್ಟೇನೆ ಸಿನಿಮಾ ನೋಡ್ಬೇಕು ಅಂತ ಹೋಗಿದಾನೆ, ಮೆಚ್ಚಲೇ ಬೇಕು ಅಭಿಮಾನವನ್ನ!!. ಕೊನೆಯವನು ಕಳೆದ ವಾರ ಊರಿಗೆ ಹೊದೋನು ಬರಬೇಕಾಗಿದೆ ಅಷ್ಟೇ. ಇಂತಾ ಸಮಯದಲ್ಲಿ ಮುಹೂರ್ತ ಕೈಗೂಡಿತ್ತೋ ಏನೋ, ಈ ತರ್ಲೆ ತಲೆ ಹರಟೆ ಬರಹ laptop ನ ಪರದೆಯ ಮೇಲೆ, ಅಂದದ ಕನ್ನಡದಲ್ಲಿ ಮುತ್ತಿನಂತೆ ಉದುರತೊಡಗಿತ್ತು..............
ಕೃತಜ್ಞತೆ/ಕೃತಘ್ನತೆ
ಗೂಗಲ್ ಅನುವಾದ,
laptop ಅನ್ನು ಸ್ನೇಹಿತನಿಗಾಗಿ ಬಿಟ್ಟು ಹೋದ room mate .
ಮತ್ತು ಈ ನನ್ನ ಅರ್ಥಹೀನ ಅಸಂಬದ್ಧ ಬರಹವನ್ನ ಓದಿದ ಎಲ್ಲಾ ಓದುಗರು.
................................................................................................................................................................................................................
ಮೇಲೆ ಇರುವ ಬರಹದಲ್ಲಿ ಯಾವುದೇ ವ್ಯಾಕರಣ, ವಾಕ್ಯ ರಚನೆ ದೋಷ, ಮತ್ತು ಅಗ್ಗವೆಂದು (vulgar) ಎಂದು ಕಂಡು ಬಂದಲ್ಲಿ ದಯವಿಟ್ಟು ಕ್ಷಮಿಸಬೇಕಾಗಿ ಓದುಗರಲ್ಲಿ ಮನವಿ.
ಯಾವುದೇ ಪ್ರಶಂಸೆ, ತಿದ್ದುಪಡಿಗಳಿಗೆ ಮುಕ್ತ ಹೃದಯದ ಸ್ವಾಗತ.